ಕೃಷ್ಣಪ್ಪ, ಬಿಡಾರಂ
1866-1931. ನಾಲ್ವಡಿ ಕೃಷ್ಣರಾಜ ಒಡೆಯರ ಆಸ್ಥಾನ ವಿದ್ವಾಂಸರಾಗಿದ್ದು ಅವರಿಂದ ಗಾನವಿಶಾರದರೆಂಬ ಬಿರುದು ಪಡೆದ ಸಂಗೀತ ಕಲಾವಿದರು. ಆಸ್ಥೆಯಿಂದ ಇವರು ಕಟ್ಟಿಸಿರುವ ರಾಮಮಂದಿರಕ್ಕೆ ಬಿಡಾರಂ ಕೃಷ್ಣಪ್ಪನವರ ರಾಮಮಂದಿರವೆಂಬ ಹೆಸರೇ ಉಳಿದು ಬಂದಿದೆ. ಕೃಷ್ಣಪ್ಪನವರ ತಂದೆ ವಿಶ್ವನಾಥಯ್ಯನವರು ಉಡುಪಿಯ ಬಳಿ ನಂದಳಿಕೆ ಗ್ರಾಮದವರು. ಇವರು ಮಂಗಳೂರು ದೇಶಸ್ಥ ಬ್ರಾಹ್ಮಣರು. ಮೈಸೂರು ಅರಸರಾಗಿದ್ದ ಮುಮ್ಮಡಿ ಕೃಷ್ಣರಾಜ ಒಡೆಯರು ಒಮ್ಮೆ ಧರ್ಮಸ್ಥಳಕ್ಕೆ ಭೇಟಿಯಿತ್ತಾಗ, ಅವರ ಗೌರವಾರ್ಥವಾಗಿ ಏರ್ಪಡಿಸಲಾಗಿದ್ದ ಯಕ್ಷಗಾನ ಮಂಡಲಿಯ ದಶಾವತಾರ ಆಟವನ್ನು ನೋಡಿ ಮೆಚ್ಚಿಕೊಂಡ ಮಹಾಸ್ವಾಮಿಗಳು ಆ ಮಂಡಲಿಯವರನ್ನು ಮೈಸೂರಿಗೆ ಬರಲು ಆಹ್ವಾನಿಸಿದರು. ಅಂತೆಯೇ ಉತ್ತಮ ಕಲಾವಿದರಾಗಿದ್ದ ವಿಶ್ವನಾಥಯ್ಯನವರು ತಮ್ಮ ಕಲಾವಿದರ ತಂಡದವರೊಂದಿಗೆ ಮೈಸೂರಿಗೆ ಬಂದು ನೆಲೆಸಿದ್ದರಿಂದ ಅವರಿಗೆ ಬಿಡಾರದವರು ಎಂಬ ಹೆಸರು ಬಂತು. ವಿಶ್ವನಾಥಯ್ಯನವರಿಗೆ ಇಬ್ಬರು ಪುತ್ರರು. ಹಿರಿಯ ಮಗ ಸುಬ್ರಾಯರು. ಕಿರಿಯ ಮಗನೇ ಕೃಷ್ಣಪ್ಪನವರು.

	ಕೃಷ್ಣಪ್ಪನವರು ಮೈಸೂರಿನಲ್ಲಿ ಜನಿಸಿದರು. ಚಿಕ್ಕಂದಿನಲ್ಲೇ ಪಿತೃ ವಿಯೋಗವಾಯಿತು. ಸಂಸಾರ ನಿರ್ವಹಣೆಯ ಜವಾಬ್ದಾರಿ ಅಣ್ಣತಮ್ಮಂದಿರ ಮೇಲೆ ಬಿತ್ತು. ಕೃಷ್ಣಪ್ಪನವರಿಗೆ ದೈವದತ್ತವಾದ ಶಾರೀರ ಸಂಪತ್ತು ವಿನಾ ಜೀವನೋಪಾಯಕ್ಕೆ ಮತ್ತಾವ ರಹವೂ ಇರಲಿಲ್ಲವಾದ ಕಾರಣ, ಊಂಛವೃತ್ತಿ ಮಾಡಿ ಸಂಸಾರ ಸಾಗಿಸಲು ನಿರ್ಧರಿಸಿ ಮೈಸೂರಿನ ಕೋಟೆ ಆಂಜನೇಯಸ್ವಾಮಿಯ ಗುಡಿಯಲ್ಲಿ ಕುಳಿತು ದೇವರನಾಮಗಳನ್ನು ಹಾಡಿ, ಭಕ್ತಾದಿಗಳು ಕೊಡುತ್ತಿದ್ದ ದಾನದಿಂದ ಉದರಂಭರಣ ಮಾಡುತ್ತಿದ್ದರು. ಒಂದು ದಿನ ಸಾಹುಕಾರ್ ತಿಮ್ಮಯ್ಯನೆಂಬುವರು ಆಂಜನೇಯನ ದರ್ಶನಾಕಾಂಕ್ಷಿಗಳಾಗಿ ಅಲ್ಲಿಗೆ ಬಂದಾಗ ಕೃಷ್ಣಪ್ಪನವರ ದಿವ್ಯವಾದ ಶಾರೀರದಿಂದ ಹೊರಹೊಮ್ಮುತ್ತಿದ್ದ ನಾದಮಾಧುರ್ಯಕ್ಕೆ ಸಂತಸಗೊಂಡು ಅವರ ಪೂರ್ವೋತ್ತರಗಳನ್ನು ವಿಚಾರಿಸಿ, ಅವರ ಪರಿಸ್ಥಿತಿಯನ್ನರಿತು, ಅವರಲ್ಲಿದ್ದ ಸಂಗೀತ ಪ್ರತಿಭೆಯನ್ನು ಪ್ರಕಾಶಕ್ಕೆ ತರಲು ಬಯಸಿ, ಆಗ ನಗರದ ಪ್ರಸಿದ್ಧ ವಿದ್ವಾಂಸರೆನಿಸಿದ್ದ ಕರೂರು ರಾಮಸ್ವಾಮಯ್ಯನವರ ಬಳಿ ಶಿಕ್ಷಣ ಪಡೆಯಲು ಏರ್ಪಾಡು ಮಾಡಿದರು. ಇದರಿಂದ ಕೃಷ್ಣಪ್ಪನವರ ತಾಯಿಯವರ ಇಷ್ಟಾರ್ಥ ಕೈಗೂಡಿದಂತಾಯಿತು. ಶಿಷ್ಯನ ಶಾರೀರಸೌಖ್ಯವನ್ನು ಮೆಚ್ಚಿದ ಗುರು ತಮಗೆ ತಿಳಿದ ವಿದ್ಯೆಯನ್ನು ನಿರ್ವಂಚನೆಯಿಂದ ಧಾರೆ ಎರೆದರು.

	ಅನಂತರ ಕೃಷ್ಣಪ್ಪನವರು ತಮ್ಮ ವಿದ್ಯಾಭ್ಯಾಸವನ್ನು ಗಿರಿಭಟ್ಟರ ತಮ್ಮಯ್ಯ, ಮೈಸೂರು ಕರಿಗಿರಿರಾಯ ಮತ್ತು ವೀಣೆ ಶೇಷಣ್ಣನವರಲ್ಲಿ ಮುಂದುವರಿಸಿ ವಿದ್ವತ್ತನ್ನು ಸಂಪಾದಿಸಿದರು. ದಿವಾನ್ ರಂಗಾಚಾರ್ಲು, ಸಾಹುಕಾರ್ ತಿಮ್ಮಯ್ಯ ಮತ್ತು ಡಾಕ್ಟರ್ ನಂಜುಂಡರಾಯರ ಪ್ರೋತ್ಸಾಹ ಮತ್ತು ಬೆಂಬಲಗಳಿಂದ ಕೃಷ್ಣಪ್ಪನವರಿಗೆ ಮಹಾರಾಜರ ಆಸ್ಥಾನದಲ್ಲಿ ತಿಂಗಳಿಗೆ ಆರು ರೂಪಾಯಿ ವೇತನ ದೊರಕಿತು. ಅನೇಕ ವರ್ಷಗಳ ಕಾಲ ಅರಮನೆಗೆ ಸೇರಿದ ನಾಟಕ ಮಂಡಲಿಯಲ್ಲಿಯೇ ಕೃಷ್ಣಪ್ಪನವರು ಅಭಿನಯಿಸುತ್ತಾ ಇದ್ದು ಕೆಲವು ಕಾಲಾನಂತರ ಆ ನಾಟಕ ಮಂಡಲಿಯನ್ನು ಬಿಟ್ಟು, ಸಂಗೀತ ಕಚೇರಿಗಳನ್ನು ಮಾಡಲು ಆರಂಭಿಸಿದರು. ಮೈಸೂರು ಮತ್ತು ದಕ್ಷಿಣ ಭಾರತದಲ್ಲೆಲ್ಲ ಇವರ ಖ್ಯಾತಿ ಹರಡಿತು. ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರು ಇವರನ್ನು ಆಸ್ಥಾನ ವಿದ್ವಾಂಸರನ್ನಾಗಿ ನೇಮಿಸಿ ಗಾನವಿಶಾರದ ಎಂಬ ಬಿರುದನ್ನೂ ಕೊಟ್ಟು ಸನ್ಮಾನಿಸಿದರು. ದಕ್ಷಿಣ ದೇಶದ ಸಭೆಗಳು ಮತ್ತು ಉತ್ಸವಗಳಲ್ಲಿ ಕೃಷ್ಣಪ್ಪನವರ ಕಚೇರಿ ಇದ್ದೇ ಇರುತ್ತಿತ್ತು. ಅಪಾರ ಕೀರ್ತಿ ಮತ್ತು ಹಣವನ್ನಿವರು ಕ್ರಮೇಣ ಸಂಪಾದಿಸಿದರು. ಸುಪ್ರಸನ್ನ ಮಾರುತಿಯ ಆರಾಧ್ಯದೇವರಾದ ಶ್ರೀರಾಮಚಂದ್ರನ ಮಂದಿರವೊಂದನ್ನು ಕಟ್ಟಿಸಬೇಕೆಂಬ ಹಂಬಲ ಇವರಲ್ಲಿ ಪ್ರಬಲವಾಯಿತು. ಬಹುವಾಗಿ ಶ್ರಮಿಸಿ, ತಮ್ಮ ಸರ್ವಸ್ವವನ್ನೂ ಧಾರೆ ಎರೆದು, ತಮ್ಮ ಜೀವಿತಕಾಲದಲ್ಲೇ ಭವ್ಯವಾದ ಪ್ರಸನ್ನ ಸೀತಾರಾಮ ಮಂದಿರವನ್ನು ಮೈಸೂರಿನ ಶಿವರಾಂಪೇಟೆಯಲ್ಲಿ ಕಟ್ಟಿಸಿ ಕೃತಾರ್ಥರಾದರು. ಶ್ರೀರಾಮನಲ್ಲಿ ಇವರಿಗಿದ್ದ ದೃಢಭಕ್ತಿಯ ಹೆಗ್ಗುರುತಾಗಿ, ಈ ಮಂದಿರ ಈಗಲೂ ಪ್ರಸಿದ್ಧವಾಗಿದೆ. ಇಲ್ಲಿ ಸ್ಥಳದ ಮತ್ತು ಪರಸ್ಥಳದ ವಿದ್ವಾಂಸರ ಸಂಗೀತ ಕಚೇರಿಗಳು ಪ್ರತಿವರ್ಷವೂ ಅವ್ಯಾಹತವಾಗಿ ನಡೆಯುತ್ತ ಬಂದಿವೆ.

	ಕೃಷ್ಣಪ್ಪನವರು ಲಾಕ್ಷಣಿಕರಾಗಿರಲಿಲ್ಲ; ಆದರೆ ಹೆಸರಾಂತ ಲಕ್ಷ್ಷವಿದ್ವಾಂಸರಾಗಿದ್ದರು. ಆ ಕಾಲದಲ್ಲಿ ಪ್ರಚಲಿತವಾಗಿದ್ದ ಸಂಗೀತದ ಲಕ್ಷಣಗಳನ್ನು ಇವರ ಸಂಗೀರ ನಿರೂಪಿಸುವಂಥದಾಗಿತ್ತು. ಇವರು ಸಾಮಾನ್ಯವಾಗಿ, ತಮ್ಮ ಕಚೇರಿಗಳಲ್ಲಿ ಕಾಂಭೋಜಿ, ಕಲ್ಯಾಣಿ, ಶಂಕರಾಭರಣ, ಭೈರವಿ ರಾಗಗಳನ್ನೂ ತ್ಯಾಗರಾಜರ ಮತ್ತು ಸದಾಶಿವರಾಯರ ಕೆಲವು ಕೃತಿಗಳನ್ನೂ ರಾಗ, ತಾನ, ಪಲ್ಲವಿಗಳನ್ನೂ, ದೇವರನಾಮಗಳನ್ನೂ ಭಾವರಸಾವೇಶದಿಂದ 4-5 ಗಂಟೆಗಳ ಕಾಲ ಹಾಡುತ್ತಿದ್ದರು. ಇವರಿಗೆ ತ್ರಿಸ್ಥಾಯಿಯಲ್ಲಿ ನುಡಿಯುವ ಅತ್ಯಂತ ಶ್ರುತಿಶುದ್ಧವಾದ, ಅದ್ಭುತವಾದ ಶಾರೀರಸಂಪತ್ತು ಇತ್ತು. ತಾಳe್ಞÁನ ಮತ್ತು ನಿರ್ವಹಣೆಯಲ್ಲಿವರು ತಾಳಬ್ರಹ್ಮರಾಗಿದ್ದರು.

	ತಮ್ಮ ಕಚೇರಿಗಳಲ್ಲಿವರು ಚೌಕ, ವಿಳಂಬ, ಮಧ್ಯಮ, ದುರಿತಕಾಲವೇ ಮುಂತಾದ ವೈವಿಧ್ಯವುಳ್ಳ ತಾಳಗತಿಯನ್ನು ನಿರೂಪಿಸುತ್ತಿದ್ದರು. ಪ್ರಾರಂಭದಿಂದ ಕೊನೆಯವರೆಗೂ ಒಂದೇ ಕಾಲದಲ್ಲಿ ಕಚೇರಿಯನ್ನು ನಿರ್ವಹಿಸುವ ಈಗಿನ ವಾಡಿಕೆಯನ್ನು ಇವರು ಅನುಸರಿಸುತ್ತಿರಲಿಲ್ಲ. ಯಾವುದೇ ಕಾಲಪ್ರಮಾಣದಲ್ಲಿ ಕೃತಿಗಳನ್ನೋ ಅಥವಾ ಪಲ್ಲವಿಯನ್ನೋ ಪ್ರಾರಂಭಿಸಿದರೆ, ಎತ್ತಿದ ಕಾಲಕ್ಕೆ ಸ್ವಲ್ಪವೂ ವ್ಯತ್ಯಾಸವಿಲ್ಲದೆ ಹಾಡುವ ಅದ್ವಿತೀಯ ಸಾಮಥ್ರ್ಯ ಇವರಿಗಿತ್ತು. ಕೈಯಲ್ಲಿ ತಾಳ ಹಾಕದೆಯೇ ಸ್ವರಕಲ್ಪನೆ ಮಾಡಿ ಎಡುಪಿಗೆ ಬಂದುಬಿಡುತ್ತಿದ್ದರು. ಆಗಿನ ಅತ್ಯಂತ ಪ್ರಸಿದ್ಧ ಮೃದಂಗ ವಿದ್ವಾಂಸರಾಗಿದ್ದ ಅಳಗನಂಬಿ, ಪಾಲಘಾಟ್ ಸುಬ್ಬಯ್ಯರ್ ಮತ್ತು ಬೆಂಗಳೂರು ಪಿಟೀಲ್ ತಾಯಪ್ಪ ಮುಂತಾದವರು ಇವರ ಕಚೇರಿಗೆ ಪಕ್ಕವಾದ್ಯ ನುಡಿಸಿ, ಇವರ ಅಸಾಧಾರಣವಾದ ತಾಳe್ಞÁನಕ್ಕೆ ಮಾರುಹೋಗಿದ್ದರು. ಇವರ ಶೈಲಿಯಲ್ಲಿ ರಾಗಲಕ್ಷಣಕ್ಕಿರಬೇಕಾದ ಗ್ರಹ, ಅಂಶ, ನ್ಯಾಸ ಮುಂತಾದ ಲಕ್ಷಣಗಳು ಶುದ್ಧವಾಗಿ ಎದ್ದು ಕಾಣುತ್ತಿದ್ದುವು. ಭಾವರಸಾವೇಶ, ಸ್ಪಷ್ಟ ಉಚ್ಚಾರ, ಅದ್ಭುತವಾದ ಶಾರೀರಗಳಿಂದ ಕೂಡಿದ ಇವರ ಸಂಗೀತ ಧ್ವನಿವರ್ಧಕವಿಲ್ಲದಿದ್ದ ಆ ಕಾಲದಲ್ಲೂ ನೂರಾರು ಜನರಿಗೆ ಕೇಳಿಸುವಂತೆ ಆನಂದದಾಯಕವಾಗಿರುತ್ತಿತ್ತು. ಇವರ ಸಂಗೀತ ಕೇವಲ ಪಾಮರರಂಜಕವಾಗಿಲ್ಲದೆ, ಪಂಡಿತರಂಜಕವೂ ಆಗಿತ್ತು. ಇವರ ಶೈಲಿಯನ್ನು ಅನುಸರಿಸಬೇಕಾದರೆ ವಿದ್ಯಾರ್ಥಿ ಒಂದು ಕಠಿಣ ತಪಸ್ಸನ್ನೇ ಆಚರಿಸಬೇಕಾಗಿತ್ತು.

	ಕೃಷ್ಣಪ್ಪನವರು ಎತ್ತರವಾಗಿ, ಗಂಭೀರವಾಗಿ, ಸ್ಫುರದ್ರೂಪಿಗಳಾಗಿದ್ದರು; ಗುಣಗ್ರಾಹಿಗಳೂ ವಿದ್ವತ್ಪಕ್ಷಪಾತಿಗಳೂ ಉದಾರಿಗಳೂ ಆಗಿದ್ದರು. ದಕ್ಷಿಣ ದೇಶದಲ್ಲಿ ಸಂಚಾರ ಮಾಡಿದ ಸಂದರ್ಭಗಳಲ್ಲಿ ಸಂಪ್ರದಾಯವನ್ನು ಪೋಷಿಸಿಕೊಂಡು ಬಂದಿದ್ದ ಅನೇಕ ವಿದ್ವಾಂಸರಿಂದ ಹಲವಾರು ವಿಷಯಗಳನ್ನಿವರು ಗ್ರಹಿಸಿದ್ದರು. ಮೈಸೂರಿನ ಕೀರ್ತಿಯನ್ನು ಹರಡಿ, ಸದಾಶಿವರಾಯರ ಕೃತಿಗಳು ಮತ್ತು ದೇವರನಾಮಗಳನ್ನು ಸಂಗೀತ ಪ್ರಪಂಚಕ್ಕೆ ಪರಿಚಯ ಮಾಡಿಕೊಟ್ಟ ಕೀರ್ತಿ ಕೃಷ್ಣಪ್ಪನವರದು. ಬಡವರೂ ದೀನರೂ ಆದ ಸಂಗೀತಗಾರರಿಗೆ ಇವರು ಉದಾರವಾಗಿ ಸಹಾಯ ಮಾಡುತ್ತಿದ್ದರು. ಇವರಿಗೆ ಅಧಿಕ ಸಂಖ್ಯೆಯಲ್ಲಿ ಶಿಷ್ಯರಿದ್ದರು. ಮನಬಿಚ್ಚಿ ಪಾಠ ಹೇಳುವುದೆಂದರೆ ಇವರಿಗೆ ಪರಮಾನಂದ. ಇವರ ಪಾಠಕ್ರಮವೂ ಬಹು ಕಠಿಣವಾಗಿತ್ತು; ಸ್ವಲ್ಪ ತಪ್ಪು ಮಾಡಿದರೂ ಸಹಿಸುತ್ತಿರಲಿಲ್ಲ. ಶಿಷ್ಯನಾದವ ಇವರಂತೆಯೇ ನಾದೋಪಾಸನೆಯ ಕಠಿಣ ವೃತ್ರವನ್ನು ಮಾಡಬೇಕಾಗಿತ್ತು. ಈ ಹಾದಿಯಲ್ಲಿ ತಮ್ಮ ದಿಟ್ಟತನದಿಂದ ಮುಂದುವರಿದವರೆಂದರೆ ಇವರ ಶಿಷ್ಯಶ್ರೇಷ್ಠರಾದ ಸಂಗೀತರತ್ನ ಟಿ. ಚೌಡಯ್ಯನವರು. ತಮ್ಮ ಅಮೋಘ ಪಿಟೀಲುವಾದನದಿಂದ ಚೌಡಯ್ಯನವರು ತಮ್ಮ ಗುರುಗಳ ಮನವನ್ನೇ ಸೂರೆಗೊಂಡು ಅವರಿಗೆ ಪಕ್ಕವಾದ್ಯವನ್ನು ನುಡಿಸಲಾರಂಭಿಸಿದರು. ಕೊನೆಗೆ ಈ ಗುರುಶಿಷ್ಯರ ಜೋಡಿ ಅತ್ಯಂತ ಪ್ರಸಿದ್ಧಿ ಪಡೆಯಿತು.		 (ನೋಡಿ- ಚೌಡಯ್ಯ,-ಟಿ)

ತಮ್ಮಂತೆಯೇ ಇವರು ಇನ್ನೂ ಕೆಲವು ಜನ ಉತ್ತಮಮಟ್ಟದ ಕಲಾವಿದರನ್ನು ತಯಾರು ಮಾಡಿದರು. ಗಾನವಿಶಾರದ ಬಿ. ದೇವೇಂದ್ರಪ್ಪ, ಸಂಗೀತ ವಿದ್ಯಾಸಾಗರ ಆರ್.ಆರ್. ಕೇಶವಮೂರ್ತಿ, ಗಾನಕಲಾಸಿಂಧು ರಾಳ್ಳಪಲ್ಲಿ ಅನಂತಕೃಷ್ಣ ಶರ್ಮ, ಆಸ್ಥಾನ ವಿದ್ವಾನ್ ಎ.ಎಸ್. ಶಿವರುದ್ರಪ್ಪ, ವಿದ್ವಾಂಸರಾದ ಎ.ಕೆ. ಸುಬ್ಬರಾವ್. ಟಿ. ಗುರುರಾಜಪ್ಪ, ಟಿ. ಪುಟ್ಟಸ್ವಾಮಯ್ಯ; ಮಹಿಳೆಯರ ಪೈಕಿ ಬೆಂಗಳೂರು ನಾಗರತ್ನಮ್ಮ, ಚಂದ್ರಮುಖಿ ಶಾರದಮ್ಮ-ಮುಂತಾದವರು ಇವರ ಶಿಷ್ಯರು. ನಾಗರತ್ನಮ್ಮನವರು ತಮ್ಮ ಗುರುಗಳ ಆದೇಶದಂತೆ ತಿರುವಾಯೂರಿನಲ್ಲಿ ತ್ಯಾಗರಾಜರ ಸಮಾಧಿಯನ್ನು ಜೀರ್ಣೋದ್ಧಾರ ಮಾಡಿದರು. ಈ ಪ್ರೇರೇಪಣೆ ಕೃಷ್ಣಪ್ಪನವರಲ್ಲಡಗಿದ್ದ ಭಕ್ತಿ ಮತ್ತು ಹೃದಯ ವೈಶಾಲ್ಯದ ದ್ಯೋತಕವಾಗಿದೆ.

	ಕೃಷ್ಣಪ್ಪನವರು ಆ ಕಾಲದಲ್ಲಿ ಮೈಸೂರಿನ ಕೀರ್ತಿಯನ್ನು ಹರಡಿದ ಅದ್ವಿತೀಯ ಗಾಯಕರಾಗಿದ್ದುದಲ್ಲದೆ ವಾಗ್ಗೇಯಕಾರರೂ ಆಗಿದ್ದರು. ಹಲವು ಕೃತಿಗಳನ್ನು ಶ್ರೀಕೃಷ್ಣ ಎಂಬ ಸ್ವನಾಮಾಂಕಿತದಲ್ಲಿವರು ರಚಿಸಿದ್ದಾರೆ.    

  (ವಿ.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ